ಚಿಂಪ್ಯಾಂಜಿó-
	ಆಫ್ರಿಕದಲ್ಲಿ ಜೀವಿಸುವ ಒಂದು ವಾನರ. ಪ್ರೈಮೇಟ್ ಗಣದ ಪಾಂಜಿಡೀ ಕುಟುಂಬಕ್ಕೆ ಸೇರಿದೆ. ಒರಾಂಗೂಟಾನ್, ಗಿಬನ್, ಗೊರಿಲಗಳ ಹತ್ತಿರ ಸಂಬಂಧಿ. ಅವುಗಳಂತೆಯೇ ಇದಕ್ಕೂ ಬಾಲವಿಲ್ಲ. ಇದರ ಶಾಸ್ತ್ರೀಯ ಹೆಸರು ಪ್ಯಾನ್ ; ಇದರಲ್ಲಿ ಟ್ರಾಗ್ಲೊಡೈಟೀಸ್ ಮತ್ತು ಪ್ಯಾನಿಸ್ಕಸ್ ಎಂಬ ಎರಡು ಮುಖ್ಯ ಪ್ರಭೇಧಗಳುಂಟು. ಪ್ಯಾನಿಸ್ಕನ್ ಪ್ರಭೇದದ ಕಳ್ಳುಬಗೆಯದು. ಇದು ಸ್ವತಂತ್ರವಾದ ಪ್ರಭೇದವೇ ಅಲ್ಲ, ಟ್ರಾಗ್ಲೊಡೈಟೀಸ್ ಪ್ರಭೇದದ ಒಂದು ಉಪಪ್ರಭೇದ ಮಾತ್ರ ಎಂಬ ಅಭಿಪ್ರಾಯವೂ ಇಲ್ಲದಿಲ್ಲ. ಈ ಅಭಿಮತಕ್ಕೆ ವಿರುದ್ಧವಾಗಿ ಪ್ಯಾನಿಸ್ಕಸ್ ಪ್ರಭೇದವನ್ನು ಪ್ಯಾನ್ ಜಾತಿಯಿಂದ ಬೇರೆಯಾದ ಮತ್ತು ಬಾನ್‍ಬೊ ಎಂಬ ಹೆಸರುಳ್ಳ ಸ್ವತಂತ್ರ ಜಾತಿಯೆಂದು ಪರಿಗಣಿಸುವ ಅಭಿಪ್ರಾಯವೂ ಉಂಟು, ಇನ್ನು ಕೆಲವರು ಪ್ಯಾನ್ ಸೇಟಿರಸ್ ವೀರಸ್, ಪ್ಯಾ, ಸೇಟಿರಸ್ ಸೇಟಿರಸ್ ಮತ್ತು ಪ್ಯಾ, ಸೇಟಿರಸ್ ಶ್ವೈನ್‍ಫುರ್ತಿಯೈ ಎಂಬ ಇನ್ನೂ ಮೂರು ಪ್ರಭೇದಗಳನ್ನು ಗುರುತಿಸುತ್ತಾರೆ. ಗೊರಿಲದಂತೆಯೇ ಚಿಂಪ್ಯಾಂಜಿó ಕೂಡ ಆಫ್ರಿಕದ ಉಷ್ಣ ವಲಯದ ದಟ್ಟಕಾಡುಗಳ ಮೂಲವಾಸಿ, ಆದರೆ ಗೊರಿಲಕ್ಕೂ ಇದಕ್ಕೂ ಗಾತ್ರ, ಸ್ವಭಾವ ಮುಂತಾದ ಗುಣಲಕ್ಷಣಗಳಲ್ಲಿ ತುಂಬ ವ್ಯತ್ಯಾಸ ಉಂಟು.

ಚಿಂಪ್ಯಾಂಜಿóಯ ಮುಖ, ಕಿವಿ, ಹಸ್ತ ಹಾಗೂ ಪಾದಗಳು ರೋಮರಹಿತ, ಮೈಯ ಮಿಕ್ಕ ಭಾಗದ ಮೇಲೆ ಒರಟಾದ, ಕಪ್ಪು ಬಣ್ಣದ ಕೂದಲುಗಳಿವೆ. ಮುಖದ ಬಣ್ಣ ಕಪ್ಪು ಇಲ್ಲವೆ ಕಂದು ಮಿಶ್ರಿತ ನಸುಗೆಂಪು. ಮೂಗು, ಕಿವಿ, ಕೈ ಹಾಗೂ ಪಾದಗಳು ಮಾತ್ರ ನಸುಗೆಂಪು ಮಾಂಸದ ಬಣ್ಣದವು. ಪೃಷ್ಠಭಾಗ ಮಾಸಲು ಬಿಳಿ ಬಣ್ಣಕ್ಕಿದೆ. ಚಿಂಪ್ಯಾಂಜಿóಯ ಮುಖ, ಉಳಿದ ವಾನರಗಳ ಮುಖಕ್ಕಿಂತ ಹೆಚ್ಚಾಗಿ ಮನುಷ್ಯ ಮುಖವನ್ನು ಹೋಲುತ್ತದೆ. ಹಣೆ ದೊಡ್ಡದು. ಕಣ್ಣುಗಳು ಚಿಕ್ಕವು; ಎದ್ದು ಕಾಣುವಂತೆ ಮುಂಚಾಚಿದ ಹುಬ್ಬಿನಿಂದಾಗಿ ಆಳವಾಗಿ ಹುದುಗಿದಂತಿವೆ. ಅವುಗಳ ಬಣ್ಣ ಮಾಸಲು ಕಂದು. ಮೂಗು ಅಗಲ ಹಾಗೂ ಚಪ್ಪಟೆ. ಮೂತಿ ಗುಂಡಗಿದೆ. ತುಟಿಗಳು ತೆಳುವಾಗಿರುವವಲ್ಲದೆ ಮುಂಚಾಚಿ ಕೊಂಡಿವೆ. ಹಲ್ಲುಗಳ ಸಂಖ್ಯೆ ಮಾನವನಲ್ಲಿರುವಂತೆಯೇ 32. ಕಿವಿಗಳು ದೊಡ್ಡಗಾತ್ರದವು. ಕಾಲುಗಳಿಗಿಂತ ಕೈಗಳು ಬಲು ಉದ್ದ ; ಚಿಂಪ್ಯಾಂಜಿó ನಿಂತಾಗ ಅದರ ಮಂಡಿಗೂ ಕೆಳಗೆ ಜೋಲು ಬೀಳುತ್ತವೆ. ಕೈಯು ಇತರ ಬೆರಳುಗಳಿಗಿಂತ ಹೆಬ್ಬೆರಳು ಬಲುಮೋಟು. ಪಾದದಲ್ಲೂ ಹಸ್ತದಲ್ಲೂ ಹೆಬ್ಬೆರಳು ಉಳಿದ ಬೆರಳುಗಳಿಗೆ ಅಭಿಮುಖವಾಗಿದೆ. ಇದರಿಂದ ರೆಂಬೆಗಳನ್ನು, ಇತರ ವಸ್ತುಗಳನ್ನು ಹಿಡಿಯಲು ಅನುಕೂಲ.

ವಯಸ್ಕ ಚಿಂಪ್ಯಾಂಜಿóಯ ಎತ್ತರ 1-1.7 m. ತೂಕ 56-80 ಞg. ಹೆಣ್ಣುಗಳು ಗಂಡುಗಳಿಗಿಂತ ಚಿಕ್ಕವು.

	ಚಿಂಪ್ಯಾಂಜಿ ಸಮಾಜಜೀವಿ; ಎರಡರಿಂದ ಇಪ್ಪತ್ತು ಪ್ರಾಣಿಗಳುಳ್ಳ ಗುಂಪು ಇಲ್ಲವೆ ಕುಟುಂಬಗಳಲ್ಲಿ ವಾಸಿಸುತ್ತದೆ. ಪ್ರತಿಗುಂಪಿಗೆ ಒಂದು ಬಲಿಷ್ಠ ಗಂಡು ನಾಯಕ. ಗುಂಪಿನ ಜವಾಬ್ದಾರಿಯೆಲ್ಲ ನಾಯಕ ಚಿಂಪ್ಯಾಂಜಿóಯದೇ ಆದರೂ ಗುಂಪಿನ ಆಗುಹೋಗುಗಳಿಗೆ ಪ್ರತಿಯೊಂದು ಸದಸ್ಯಪ್ರಾಣಿಯ ವೈಯಕ್ತಿಕ ನಿಷ್ಠೆಯೂ ಮುಖ್ಯ. ಪ್ರತಿಯೊಂದು ಗುಂಪಿಗೂ ಅದರದೇ ಆದ ಅಧೀನ ಪ್ರಾಂತ್ಯವಿರುತ್ತದೆ. ಇಂಥ ಪ್ರಾಂತ್ಯದ ವಿಸ್ತೀರ್ಣ ಸುಮಾರು 10 ಚದರ ಮೈಲಿಯಷ್ಟಿರಬಹುದು. ಚಿಂಪ್ಯಾಂಜಿó ಸಾಮಾನ್ಯವಾಗಿ ನೆಲದ ಮೇಲೇ ಕಾಲ ಕಳೆಯುವುದಾದರೂ ಹೆಚ್ಚುದೂರ ಪ್ರಯಾಣ ಮಾಡಬೇಕಾದಾಗ ಖುಷಿಯಾಗಿ ಮರದಿಂದ ಮರಕ್ಕೆ ಕೈಕಾಲುಗಳ ಸಹಾಯದಿಂದ ಜಿಗಿಯುತ್ತ, ತೊನೆಯುತ್ತ ಸಾಗುತ್ತದೆ. ನೆಲದಮೇಲೆ ನಡೆಯುವಾಗ ಕೈಲಾಲುಗಳೆರಡನ್ನೂ ಬಳಸುತ್ತದೆ. ಕಾಲುಗಳನ್ನು ಕೊಂಚಬಗ್ಗಿಸಿ, ದೇಹವನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ಕೈಬೆರಳುಗಳನ್ನು ಹಿಂದಕ್ಕೆ ಮಡಿಚಿಕೊಂಡು ನಡೆಯುವುದೇ ಸಾಮಾನ್ಯಕ್ರಮ, ಕೆಲವೊಮ್ಮೆ ಮನುಷ್ಯನಂತೆ ಬರಿಯ ಕಾಲುಗಳ ಮೇಲೆಯೇ ನಡೆಯುವುದುಂಟು. ಹೀಗೆ ನಡೆಯುವಾಗ ಪಾದಗಳನ್ನು ಅಡ್ಡಡ್ಡವಾಗಿ ಇಡುತ್ತದೆ. ಹಗಲೆಲ್ಲ ಆಹಾರವನ್ನು ಅರಸಿಕೊಂಡು ಸಂಚರಿಸುತ್ತಿದ್ದು ರಾತ್ರಿಯ ವೇಳೆಗೆ ಮರದಲ್ಲಿ ಸೊಪ್ಪುಸದೆಯ ಗೂಡುಗಳನ್ನು ನಿರ್ಮಿಸಿಕೊಂಡು ಗುಂಪಿನ ಎಲ್ಲ ಚಿಂಪ್ಯಾಂಜಿóಗಳೂ ಒಟ್ಟಿಗೆ ಮಲಗಿಬಿಡುತ್ತವೆ. ಹಗಲಿನಲ್ಲೂ ಇಂಥ ಗೂಡುಗಳನ್ನು-ಮರದ ಮೇಲೆ ಇಲ್ಲವೆ ನೆಲದ ಮೇಲೆ-ಕಟ್ಟಿಕೊಂಡು ಮಲಗಿ ವಿಶ್ರಮಿಸುವ ರೂಢಿ ಉಂಟು, ಕೆಲವು ಸಲ ಹೆಚ್ಚು ಬಿಸಿಲಿದ್ದರೆ ಗೂಡುಗಳ ಮೇಲೆ ಒಂದು ತೆರನ ಒರಟು ಚಾವಣಿಯನ್ನೂ ಕಟ್ಟುವುವು. ಸಾಮಾನ್ಯವಾಗಿ ರಾತ್ರಿಯೆಲ್ಲ ನಿದ್ದೆಯಲ್ಲೇ ಕಳೆಯುವುವಾದರೂ ಬೆಳದಿಂಗಳಿದ್ದರೆ ಎಚ್ಚರಗೊಂಡು ಏನಾದರೂ ಕಾರ್ಯನಿರತವಾಗಿರುವುದುಂಟು. ಬೆಳಗಿನ ಝಾವ ಎದ್ದು ಸೂರ್ಯ ಹುಟ್ಟಿದ ಎರಡು ಗಂಟೆಗಳವರೆಗೆ ಆಹಾರವನ್ನು ತಿನ್ನುತ್ತಿದ್ದು, ಅನಂತರ ತಿನ್ನುವುದನ್ನು ಕಡಿಮೆಮಾಡಿ, ಮಧ್ಯಾಹ್ನದ ವೇಳೆಗೆ ಕೊಂಚ ವಿಶ್ರಮಿಸಿಕೊಂಡು ಸಂಜೆ ಮತ್ತೊಮ್ಮೆ ಗಣನೀಯ ಪರಿಮಾಣದಲ್ಲಿ ಆಹಾರವನ್ನು ಸೇವಿಸಿ ರಾತ್ರಿಯ ಹೊತ್ತಿಗೆ ಮರವನ್ನೇರಿ ಮಲಗುವುದು ಇವುಗಳ ದಿನನಿತ್ಯದ ಕಾರ್ಯಕ್ರಮ. ಹಣ್ಣುಹಂಪಲು, ಚಿಗುರು, ಗೆಡ್ಡೆಗೆಣಸು ಮುಂತಾದವೇ ಚಿಂಪ್ಯಾಂಜಿóಗಳ ಪ್ರಧಾನ ಆಹಾರ, ಕೀಟಗಳನ್ನೂ ಹಕ್ಕಿಗಳ ಮೊಟ್ಟೆಗಳನ್ನೂ ತಿನ್ನುವುದಿದೆ. ಕೆಲವೊಮ್ಮೆ ಬುಶ್‍ಬಕ್ ಮುಂತಾದ ಜಿಂಕೆಗಳನ್ನು ಬೇಟೆಮಾಡಿ ತಿನ್ನುವುದುಂಟು.

ವಾನರಗಳಲ್ಲೆಲ್ಲ ಇದು ಅತ್ಯಂತ ಬುದ್ಧಿಶಾಲಿಯೆನಿಸಿಕೊಂಡಿದೆ. ಇದರ ಗ್ರಹಣಶಕ್ತಿ ಅಪಾರ, ಕಣ್ಣು, ಕಿವಿ ಬಲುಚರುಕು. ಭಾವಾಭಿವ್ಯಕ್ತಿ ವ್ಯವಸ್ಥೆಯನ್ನು ಚೆನ್ನಾಗಿ ರೂಢಿಸಿಕೊಂಡಿರುವ ಪ್ರಾಣಿ ಇದು. ಮುಖದ ಮಾಂಸಖಂಡಗಳು ನಿಖರವಾಗಿ ರೂಪುಗೊಂಡಿರುವುದರಿಂದ ಕೋಪ, ಆಶ್ಚರ್ಯ, ದುಃಖ, ಸಂತೋಷ ಮುಂತಾದ ವಿವಿಧ ಭಾವಗಳನ್ನು ಚೆನ್ನಾಗಿ ತೋರಿಸಬಲ್ಲದು. ಪ್ರೈಮೇಟುಗಳಲ್ಲಿ ಪೂರ್ವಾಪರ ವಿವೇಚನಶಕ್ತಿ ಮೊಟ್ಟಮೊದಲಿಗೆ ಕಂಡುಬರುವುದು ಚಿಂಪ್ಯಾಂಜಿóಯಲ್ಲಿ, ಜೊತೆಗೆ ಕೋಲು ಮುಂತಾದವನ್ನು ಆಯುಧಗಳಾಗಿ ಉಪಕರಣಗಳಾಗಿ ಬಳಸುವ ಬುದ್ಧಿ ಶಕ್ತಿಯೂ ಇದಕ್ಕೆ ಇದೆ. ಚಿಂಪ್ಯಾಂಜಿó ಕೊನೆಯಪಕ್ಷ 32 ಬಗೆಯ ಶಬ್ದಗಳನ್ನು ಮಾಡಬಲ್ಲದು. ಬಹುಶಃ ಇದು ಒಂದು ನಿಮ್ನ ರೀತಿಯ ಭಾಷೆಯಿರಬಹುದು. ಅಲ್ಲದೆ ತುಟಿಗಳನ್ನು ಮುಂದಕ್ಕೆ ಚಾಚುವುದು, ಹಿಂದಕ್ಕೆ ಎಳೆಯುವುದು, ಹಲ್ಲು ಕಡಿಯುವುದು, ತುಟಿಚಪ್ಪರಿಸುವುದು ಮುಂತಾಗಿ ಹಲವಾರು ಬಗೆಯಲ್ಲಿ ಮುಖಭಾವಗಳನ್ನು ಪ್ರದರ್ಶಿಸುವುದರ ಮೂಲಕವೂ ತನ್ನ ಇಂಗಿತಗಳನ್ನು ತೋರಿಸಬಲ್ಲದು. ಜೊತೆಗೆ ಚಿಂಪ್ಯಾಂಜಿó ಬಲು ತುಂಟ ಪ್ರಾಣಿಯೂ ಹೌದು. ಒಂದುಕ್ಷಣವೂ ಸುಮ್ಮನೆ ಕುಳಿತಿರದೆ ಏನಾದರೂ ಚೇಷ್ಟೆ ಮಾಡುತ್ತಲೇ ಇರುತ್ತದೆ. ಇದರಿಂದಾಗಿ ಇದಕ್ಕೆ ವಾನರ ಜಗತ್ತಿನ ಬಹಿರ್ಮುಖಿ ಎಂಬ ಹೆಸರು ಬಂದಿದೆ. ಇದು ತನ್ನ ಕೈಯಿಂದ ಇಲ್ಲವೆ ಕಾಲಿನಿಂದ ನೆಲವನ್ನೊ, ಮರಗಳ ಕಾಂಡವನ್ನೊ, ಟೊಳ್ಳಾದ ಮರದ ದಿಮ್ಮಿಗಳನ್ನೊ ಬಡಿದು ಒಂದು ರೀತಿಯ ಸಂಗೀತವನ್ನೂ ಮಾಡುವುದಂತೆ, ಇದು ಸಂಗೀತವಿರಲಿ ಅಲ್ಲದಿರಲಿ ಆಫ್ರಿಕದ ಕೆಲ ಆದಿವಾಸಿಗಳು ತಮ್ಮ ಮದ್ದಳೆ ತಾಡನದ ಮೂಲಕ ಸುದ್ದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕಳಿಸುವಂತೆ, ಚಿಂಪ್ಯಾಂಜಿóಗಳು ಕೂಡ ಸುದ್ದಿಸಾಗಣೆಗೆ ಬಳಸುವ ವ್ಯವಸ್ಥೆಯಿರಬಹುದು. ಚಿಂಪ್ಯಾಂಜಿó ಬಲು ಸ್ನೇಹಪರ ಜೀವಿ ಕೂಡ. ಕರುಣೆಯಿಂದ, ಪ್ರೀತಿಯಿಂದ ನಡೆಸಿಕೊಂಡರೆ ಇದನ್ನು ಬಹುಸುಲಭವಾಗಿ ಪಳಗಿಸಬಹುದಲ್ಲದೆ ಇದಕ್ಕೆ ಹಲವಾರು ಬಗೆಯ ಚಳಕಗಳನ್ನೂ ಕಲಿಸಬಹುದು. ಇದರಿಂದಾಗಿ ಚಿಂಪ್ಯಾಂಜಿó ಬಹಳ ಜನಪ್ರಿಯ ಪ್ರಾಣಿಯಾಗಿದೆ. ಚಿಂಪ್ಯಾಂಜಿóಗಳಲ್ಲಿ ರಜಸ್ಸು ಚಕ್ರ ಸುಮಾರು ಮೂವತ್ತೈದು ದಿವಸಗಳಿಗೊಮ್ಮೆ. ಈ ಅವಧಿಯ ಯಾವುದೋ ಒಂದು ಕಾಲದಲ್ಲಿ ಹೆಣ್ಣಿನ ಜನನೇಂದ್ರಿಯ ಹಾಗೂ ಸುತ್ತಮುತ್ತಲ ಭಾಗ ಉಬ್ಬುತ್ತದೆ. ಹೆಣ್ಣು ಆಗ ಸಂಭೋಗ ಬಯಸುತ್ತದೆ. ಗಂಡು ಕೂಡ ಮದವೇರಿದಾಗ ಸಂಭೋಗ ಬಯಕೆಯ ತೀವ್ರತೆಯನ್ನು, ಕೈಗಳನ್ನು ಮರಕ್ಕೆ ಬಡಿಯುತ್ತಲೋಚಪ್ಪಾಳೆ ತಟ್ಟುತ್ತಲೋನ ಅಥವಾ ನೆಲದ ಮೇಲೆ ಅವಿಶ್ರಾಂತವಾಗಿ ನೆಗೆದಾಡುತ್ತಲೋ ತೋರಿಸಿಕೊಳ್ಳುತ್ತದೆ. ಗರ್ಭಾವಸ್ಥೆಯ ಕಾಲವೂ ಲಂಬವೇ-ಸುಮಾರು 8 ತಿಂಗಳು. ಸಾಮಾನ್ಯವಾಗಿ ಒಂದು ಬಾರಿಗೆ ಒಂದೇ ಮರಿ ಹುಟ್ಟುತ್ತದೆ. ಅವಳಿ ಮರಿಗಳೂ ಹುಟ್ಟುವುದುಂಟು. ಹುಟ್ಟಿದ ಮರಿ ಕೊನೆಯ ಪಕ್ಷ ಎರಡು ವರ್ಷಗಳಷ್ಟು ಕಾಲ ತಾಯಿಯನ್ನು ಆಶ್ರಯಿಸಿಕೊಂಡೇ ಬದುಕುತ್ತದೆ. ಈ ಮರಿ ಲೈಂಗಿಕ ಪ್ರಬುದ್ಧತೆಯನ್ನು ತಲುಪಲು ಸುಮಾರು ಹತ್ತು ಹನ್ನೆರಡು ವರ್ಷಗಳಾಗುತ್ತವೆ. ಚಿಂಪ್ಯಾಂಜಿóಯ ಆಯುಸ್ಸು ಸುಮಾರು ನಲವತ್ತು ವರ್ಷಗಳು.

	ವೈದ್ಯಕೀಯ ಹಾಗೂ ಶರೀರ ವಿಜ್ಞಾನಗಳಲ್ಲಿ ಚಿಂಪ್ಯಾಂಜಿóಗೆ ಅತ್ಯಂತ ಶ್ರೇಷ್ಠ ಸ್ಥಾನವುಂಟು. ಕಾರಣ, ಇದು ಮನುಷ್ಯನಿಗೆ ಹತ್ತಿರ ಸಂಬಂಧಿಯಾಗಿರುವುದು. ಇದು ಮಂಗಗಳಿಗಿಂತ ಮನುಷ್ಯನಿಗೆ ಹತ್ತಿರ ಎನ್ನುವುದನ್ನು ತುಲನಾತ್ಮಕ ಅಂಗ ರಚನಾಶಾಸ್ತ್ರ, ಶರೀರ ವಿಜ್ಞಾನಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರಗಳ ಸಂಶೋಧನೆಗಳಿಂದ ಶ್ರುತಪಡಿಸಲಾಗಿದೆ. ಇದರ ಕಂಕಾಲ ಮನುಷ್ಯನ ಕಂಕಾಲವನ್ನು ಹೋಲುವುದೂ ಈ ಅಭಿಪ್ರಾಯದ ಒಂದು ಮುಖ್ಯ ಆಧಾರಾಂಶವಾಗಿದೆ.
(ಕೆ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ